Saturday, August 13, 2016

ಯಕ್ಷಪ್ರಸಂಗ ಕೋಶ ಕುರಿತಾಗಿ ಸಾರ್ವಜನಿಕ ಬ್ಲಾಗಿನ ಲ೦ಘನ


ಯಕ್ಷಪ್ರಸಂಗ ಕೋಶ ಯೋಜನೆಯ ಸುತ್ತಲಿನ ಪ್ರಾರ೦ಭಿಕ ಪ್ರಯತ್ನಗಳ ಫಲವಾಗಿ ಇನ್ನು ಕೆಲವೇ ದಿನಗಳಲ್ಲಿ ಅ೦ತರ್ಜಾಲದಲ್ಲೇ ಯಕ್ಷಪ್ರಸ೦ಗಯಾದಿಯ ಮೊದಲ ಕರಡಿನ ಲೋಕಾರ್ಪಣೆ.  ಆ ಮುನ್ನ ಯಕ್ಷಪ್ರಸಂಗ ಕೋಶ ಕುರಿತಾಗಿ ಸಾರ್ವಜನಿಕ ಬ್ಲಾಗಿನ ಲ೦ಘನದ ಈ ಗಳಿಗೆಯಲ್ಲಿ ನವಯಕ್ಷಕಣ್ಮಣಿಯಾಗಿ ಉದಿಸಿರುವ ಡಾ. ಪ್ರದೀಪ ಸಾಮಗರ ಮುನ್ನುಡಿಯ ಮಾತುಗಳು.

ಯಕ್ಷಪ್ರಸಂಗ ಕೋಶ ತಂಡದ ಪರವಾಗಿ,
- ನಟರಾಜ ಉಪಾಧ್ಯ
----------------------------------------------------------------
ವಿವಿಧ ಕಾಲಘಟ್ಟಗಳಲ್ಲಿ ಅನೇಕರ ಪರಿಶ್ರಮದಿಂದ ಸಂಸ್ಕರಿತವಾಗಿ ಬೆಳೆದು ಬಂದ ಜನಪದ ಪ್ರಿಯ ಸರ್ವಾಂಗ ಸುಂದರ ಕಲೆ ನಮ್ಮ ಯಕ್ಷಗಾನ. ಕಲೆಯು ನೀಡುವ ಅಮಿತಾನಂದ ಶರಧಿಯಲ್ಲಿ ಈಜ ಬಯಸುವವನಿಗೆ ಯಕ್ಷಗಾನವು ಅನಂತ ಸಾಧ್ಯತೆಗಳನ್ನು ತೆರೆದಿಡುತ್ತದೆ. ಗೀತ, ನೃತ್ಯ, ಮಾತು, ಆಹಾರ್ಯ, ಸಾಹಿತ್ಯ, ಪ್ರದರ್ಶನಗಳೆಂಬ ಆರು ವಿಭಾಗಗಳಲ್ಲಿ ಹಲವು ಎತ್ತರ-ಬಿತ್ತರಗಳನ್ನು ಸಾಧಿಸುವ ಅವಕಾಶ ಕಲೆಯಲ್ಲಿದೆ. ಹಾಗಾಗಿಯೇ ಇತರ ಜಾನಪದ ಕಲಾ ಪ್ರಕಾರಗಳು ಸಾರ್ವಜನಿಕ ಅವಜ್ಞೆಗೆ ಒಳಗಾಗುತ್ತಿರುವಾಗ, ಪಡುವಲಪಾಯ ಯಕ್ಷಗಾನ ಮಾತ್ರ ತನ್ನ ಅಸ್ಮಿತೆ, ಅನನ್ಯತೆ ಹಾಗೂ ಜನಪ್ರಿಯತೆಗಳನ್ನು ಇನ್ನೂ ಉಳಿಸಿಕೊಂಡಿದೆ. ವಿವಿಧ ಕಾಲಘಟ್ಟದ ಸ್ಥಿತ್ಯಂತರಗಳಿಗೆ ಕಲೆ-ಕಲಾವಿದ-ಪ್ರೇಕ್ಷಕರು ಮುಕ್ತವಾಗಿದ್ದುದೇ ಇದಕ್ಕೆ ಕಾರಣ. ಒಂದು ಆಟ ನೋಡಿದ ಪಾಪ ಪರಿಹಾರಾರ್ಥವಾಗಿ ಹತ್ತು ರಂಗಪೂಜೆ ನೋಡಬೇಕೆಂಬ ಮಡಿವಂತಿಕೆ ಮಾಯವಾಗಿ, ಇದೊಂದು ರಂಜನಾತ್ಮಕ, ಬೋಧನಾತ್ಮಕ ಸರಳ ರಂಗಭೂಮಿಯೆಂಬ ಅಭಿಮಾನಜಾಗೃತಿಗಳು ಮೂಡಿದ ನಂತರದಲ್ಲಿ ಹಲವು ಸ್ಥಿತ್ಯಂತರಗಳನ್ನು, ಸಂಕ್ರಮಣಗಳನ್ನು ರಂಗಭೂಮಿ ಕಂಡಿದೆ ಮಾತ್ರವಲ್ಲ ಯಶಸ್ವಿಯಾಗಿ ಅರಗಿಸಿಕೊಂಡಿದೆ ಕೂಡ.
ಕಲೆ ಕಂಡ ಅನವರತ ಸಂಸ್ಕಾರಗಳನ್ನು ಪಟ್ಟಿ ಮಾಡುವಷ್ಟು ಪ್ರಾಜ್ಞತೆಯೂ ನನ್ನಲ್ಲಿಲ್ಲ ಮಾತ್ರವಲ್ಲ, ಯಕ್ಷಗಾನದಂಥ ಕಲೆಯಲ್ಲಿ ಅದು ಕಾರ್ಯಸಾಧುವೂ ಅಲ್ಲ. ಹಾಗಿದ್ದರೂ ಕಾಲಾನುಕ್ರಮದಲ್ಲಿ ಆಟಗಳಲ್ಲಾದ ರೂಪಾಂತರಗಳು ಅನೇಕ. ಹಾಡುಗಬ್ಬವಾಗಿದ್ದ ಪ್ರಸಂಗಗಳು ಪ್ರದರ್ಶನದ ಸ್ವರೂಪ ಪಡೆದುದು; ಪ್ರದರ್ಶನಕ್ಕೆ ಸೀಮಿತವಾಗಿ ಬಯಲಾಟ ಮಾತ್ರವಾಗಿದ್ದ ಯಕ್ಷಗಾನವು ತಾಳಮದ್ದಲೆಯೆಂಬ ಕೂಟಗಳಾದುದು; ಪ್ರದರ್ಶನಕ್ಕೊಂದು ಶಾಸ್ತ್ರೀಯ ಆವರಣವನ್ನೊದಗಿಸಿದ ಪಾರ್ತಿಸುಬ್ಬನಸಭಾಲಕ್ಷಣರಚನೆ; ಆಸಕ್ತರ ಆಸಕ್ತಿಯ ಆಡೊಂಬಲವಾಗಿ ಅಲ್ಲಲ್ಲಿ ಮಾತ್ರ ಪ್ರದರ್ಶಿತವಾಗುತ್ತಿದ್ದ ಆಟಗಳುಮೇಳಕಲ್ಪನೆಯಲ್ಲಿ ಆಶ್ರಯ ಪಡೆದಾನಂತರದ ನಿರಂತರ ಸಂಚಾರ; ಮೇಳಗಳಿಗೆ ಆಶ್ರಯದಾತವಾದ ಕ್ಷೇತ್ರಗಳು; ಗೊಂಬೆಗಳಿಂದ ಯಕ್ಷಗಾನವನ್ನು ಪಡಿಮೂಡಿಸುವ ಪ್ರಯತ್ನ; ಕೆರೆಮನೆ ಶಂಭು ಹೆಗಡೆಯವರಂಥವರಿಂದ ಆಹಾರ್ಯ- ರಂಗ ಕಲ್ಪನೆಗಳ ಪುನರ್ವಿಮರ್ಶೆ ಮತ್ತು ಪುನರ್ವಿನ್ಯಾಸ; ಚಿಟ್ಟಾಣಿಯಂಥವರಿಂದ ಯಕ್ಷನೃತ್ಯದ ಹೊಸ ಮಜಲುಗಳ ಅನಾವರಣ; ಉಪ್ಪೂರ- ಬಲಿಪ ಮೊದಲಾದ ಭಾಗವತರಿಂದ ಭಾಗವತಿಕೆಗೆ ಚೌಕಟ್ಟಿನ ಸೃಷ್ಟಿ; ಸಾಮಗ-ಶೇಣಿಯಂಥಾ ಹರಿದಾಸರ ಆಗಮನದಿಂದ ವಾಚಿಕಕ್ಕೆ ದೊರೆತ ಹೊಸ ಆಯಾಮ; ಶಿವರಾಮ ಕಾರಂತರಂಥವರಿಂದ ಯಕ್ಷಗಾನದ ಹೊಸ ರಂಗ ಹಾದಿಗಳ ಅನ್ವೇಷಣೆ; ಮುದ್ದಣ, ದೇವಿದಾಸ ಮೊದಲಾದ ಕವಿಗಳಿಂದ, ಪಾರ್ತಿಸುಬ್ಬನ ಸಾಧಾರಣ ಪದಬಂಧ-ಛಂದೋಬಂಧಗಳಿಗಿಂತ ಭಿನ್ನವಾದ ಉನ್ನತ ಸ್ಥರದ ಸಾಹಿತ್ಯಗಳ ರಚನೆ; ಕಾಳಗ- ಕಲ್ಯಾಣಗಳ ಮೂಲದ್ರವ್ಯಕ್ಕೆ ಹೊರತಾದ ಕಥೆಗಳ ಸಾಹಿತ್ಯ; ನಾರಯಣ ಶೆಟ್ಟರಂಥವರಿಂದ ಯಕ್ಷ ಛಂದಸ್ಸಿನ ಆಳವಾದ ಅಧ್ಯಯನ ಮುಂತಾದುವು ಯಕ್ಷಗಾನದ ರಂಗ ಪರಿಕಲ್ಪನೆಯ ರೂಪಾಂತರಗಳಾದರೆ; ತಂತ್ರಜ್ಞಾನದ ಬೆಳವಣಿಗೆಯೂ ಯಕ್ಷಗಾನದಲ್ಲಿ ಅನೇಕ ಧನಾತ್ಮಕ ರೂಪಾಂತರಗಳನ್ನು ತಂದಿದೆ. ಸುಲಭ ಲಭ್ಯ ಪರಿಕರಗಳಿಂದ ರೂಪುದಳೆಯುತ್ತಿದ್ದ ಭಾರದ ಆಹಾರ್ಯಗಳ ಬದಲು ಹಗುರಾದ ವಸ್ತುಗಳ ಬಳಕೆ, ಸುಧಾರಿತ ಧ್ವನಿ-ಬೆಳಕು, ಕೃತಕ ರಂಗಿನ ಬಳಕೆ, ಮ್ಯಾಜಿಕ್- ಚಲನಚಿತ್ರ ಇತ್ಯಾದಿಗಳಿಂದ ಪ್ರಭಾವಿತವಾದ ರಂಗ ನಡೆಗಳು ಮುಂತಾದುವು ನವೀನ ತಂತ್ರಜ್ಞಾನಗಳಿಗೆ ಯಕ್ಷಗಾನ ರಂಗದ ತೆರೆದುಕೊಳ್ಳುವಿಕೆಗೆ ಸಾಕ್ಷಿಗಳು.

ಹೀಗೆ ಬದಲಾವಣೆಗಳನ್ನು-ತಂತ್ರಜ್ಞಾನವನ್ನು ತಕ್ಕೈಸುವ ಕಲೆಯು ಅಪರಿಮಿತ ಸಾಧ್ಯತೆಗಳ ಮಾಧ್ಯಮವಾಗಿರುವ ಮಾಹಿತಿ ತಂತ್ರಜ್ಞಾನದಿಂದ ಪಡೆದ ಕೊಡುಗೆಗಳು ಮಾತ್ರ ಸೀಮಿತ. ಎಲ್ಲೆಲ್ಲ ಅನಂತ ದತ್ತಾಂಶಗಳ ಸಂಗ್ರಹವಾಗುತ್ತದೆಯೋ, ಅಲ್ಲೆಲ್ಲ ಅದನ್ನು ಸಂರಕ್ಷಿಸಿ, ಪರಿಷ್ಕರಿಸಿ, ಸಂಸ್ಕರಿಸಿ ಮಾಹಿತಿಯನ್ನು ಪಡೆಯುವಲ್ಲಿ ಮಾಹಿತಿ ತಂತ್ರಜ್ಞಾನ ಅವಿಭಾಜ್ಯವೆನಿಸಿದೆ. ಯಕ್ಷಗಾನದ ಒಂದೊಂದು ಪ್ರದರ್ಶನವೂ ಒಂದೊಂದು ಪ್ರಯೋಗಗಳು. ಅಂದಿನ ಕಲಾವಿದರ ಅಧ್ಯಯನ, ಸಾಮರ್ಥ್ಯ, ಮನೋವಿಲಾಸ, ಪರಿಸ್ಥಿತಿಗಳಿಗೆ ಅನುಗುಣವಾಗಿ ಪ್ರತಿಯೊಂದು ಪ್ರಯೋಗಗಳೂ ನವ ನವೀನವಾಗಿರುವುದೇ ಯಕ್ಷಗಾನದ ಅನನ್ಯತೆ. ಹಾಗಾಗಿ ವರ್ಷದಲ್ಲಿ ಹನ್ನೆರಡು ತಿಂಗಳೂ, ಕನಿಷ್ಟ ಜಿಲ್ಲೆಗಳಲ್ಲಿ, ೩೦ಕ್ಕೆ ಕಡಿಮೆಯಿಲ್ಲದ ಮೇಳಗಳು ಮತ್ತು ೧೦೦ಕ್ಕೆ ಕಡಿಮೆಯಿಲ್ಲದ ಹವ್ಯಾಸಿ ಸಂಘಗಳಿಂದ ನಡೆಯುವ ಸುಮಾರು ೧೦,೦೦೦ ಕ್ಕೆ ಕಡಿಮೆಯಿಲ್ಲದ ಪ್ರದರ್ಶನಗಳು ದಾಖಲಾದರೆ ದೊರೆಯಬಹುದಾದ ದತ್ತಾಂಶಗಳು ಊಹಾತೀತ. ಆದರೆ ಇವತ್ತಿಗೂ ದತ್ತಾಂಶಗಳ ಸರಿಯಾದ ನಿರ್ವಹಣೆಯಾಗುತ್ತಿಲ್ಲ. ಕೆಲವು ಆಸಕ್ತರು ವೈಯಕ್ತಿಕ ನೆಲೆಯಲ್ಲಿ ತಮ್ಮ ಸಮಯ- ಅನುಭವ- ಜ್ಞಾನದ ಪರಿಮಿತಿಯಲ್ಲಿ ತಮ್ಮಲ್ಲಿರುವ ಯಕ್ಷಗಾನ ದತ್ತಾಂಶಗಳನ್ನು ನಿರ್ವಹಿಸುತ್ತಿದ್ದಾರೆ. ಇದರಿಂದ ಸಮಗ್ರ ಯಕ್ಷಗಾನದ ಮಾಹಿತಿ ಬೇಕೆಂದಾಗ ದೊರಕುತ್ತಿಲ್ಲದಿರುವುದು, ಯಕ್ಷಗಾನದ ಮಟ್ಟಿಗೆ ಬೆಣ್ಣೆಯಿದ್ದೂ ತುಪ್ಪ ಉಣ್ಣಲಾಗದಂತೆ ಸರಿ. ಯಕ್ಷಗಾನದ ಆರು ಅಂಗಗಳಲ್ಲಿ ಆಗುತ್ತಿರುವ, ಒಂದಕ್ಕಿಂತ ಒಂದು ಹೊರತಾದ ಅಥವಾ ಜೊತೆಯಾದ ಬೆಳವಣಿಗೆಗಳ ಸರಿಯಾದ ತಾಂತ್ರಿಕ ನಿರ್ವಹಣೆ ಸಾಧಿತವಾದರೆ ಯಕ್ಷಗಾನದ ಸರ್ವಾಂಗೀಣ ಬೆಳವಣಿಗೆಗೆ ಪೂರಕವಾದೀತು.
ನಿಟ್ಟಿನಲ್ಲಿ ಬೆಂಗಳೂರು ಹಾಗೂ ಹೊರವೂರುಗಳ ಸಮಾನ ಮನಸ್ಕ ಯಕ್ಷಗಾನಾಸಕ್ತರು ಸೇರಿ  ಯಕ್ಷಗಾನಕ್ಕೊಂದು ಸಮಗ್ರ, ಉಚಿತ ಹಾಗೂ ಸರ್ವರಿಗೂ ಲಭ್ಯವಾಗುವ ವಿಶ್ವಕೋಶವನ್ನು ಅಂತರ್ಜಾಲದಲ್ಲಿ ಹೊರತರುವ ಉದ್ದೇಶವನ್ನು ಹೊಂದಿದ್ದೇವೆ. ನಮ್ಮೀ ಪ್ರಯತ್ನ ಸಾಗರವನ್ನು ತೆಪ್ಪದಲ್ಲಿ ದಾಟ ಹೊರಟಂತೆ ಎಂಬ ಅರಿವು ನಮಗಿದೆ. ಆದರೂ ನಮ್ಮ ಪರಿಮಿತಿಯ ಒಳಗೆಯೇ ಯಕ್ಷಗಾನಾಂಬೆಯ ಸೇವೆ ಮಾಡುವ ಉತ್ಸಾಹವೂ ಇದೆ. ಹಾಗಾಗಿ ವಿಶ್ವಕೋಶದ ಪ್ರಥಮ ಹಂತವಾಗಿ ಯಕ್ಷಪ್ರಸಂಗ ಕೋಶವೊಂದನ್ನು ಸಿದ್ಧಗೊಳಿಸುವತ್ತ ಅಂಬೆಗಾಲಿಟ್ಟಿದ್ದೇವೆ.

ಯಕ್ಷಗಾನ ಪ್ರಸಂಗಗಳೆಂಬ ಅನನ್ಯ ಚಂಪೂ ಕಾವ್ಯಗಳು: ಅವಜ್ಞೆ ಮತ್ತು ಪರಿಮಿತಿ
ಯಕ್ಷಗಾನ ಪ್ರಸಂಗಗಳು ಅನರ್ಘ್ಯ ಛಂದೋಬಂಧಗಳಿಂದ ಕೂಡಿದ, ಸರಳ ಭಾಷೆಯಲ್ಲಿ ಹಲವು ಗೂಢಾರ್ಥಗಳನ್ನು ಅರಗಿಸಿಕೊಂಡು ಅರ್ಥದಾರಿಗೆ ಹಲವು ದಾರಿಗಳನ್ನು ತೋರುವ ಸೂತ್ರ ರೂಪಿ ಪದ್ಯಗಳಿಂದೊಡಗೂಡಿದ ಚಂಪೂ ಕಾವ್ಯಗಳು. ಪ್ರದರ್ಶನಕ್ಕೆ ಬೇಕಾಗುವ ಅನಿವಾರ್ಯತೆಗಳಾದ ಕಥೆಯ ಗಟ್ಟಿತನ, ವೇಷ ವೈವಿಧ್ಯ, ಸಂಭಾಷಣಾ ಯೋಗ್ಯ ಅಭಿನಯ ಯೋಗ್ಯ ಪದ್ಯಗಳು, ಆರೂವರೆ ತಾಸಿಗೆ ಹಿಗ್ಗಿಸಬಹುದಾದ ಕಥೆ, ದೃಶ್ಯ-ದೃಶ್ಯಾವಳಿಗಳ ಸಂಯೋಜನೆ ಇತ್ಯಾದಿಗಳ ಕೊರತೆಯಿಂದಾಗಿ ಎಲ್ಲಾ ಪ್ರಸಂಗಗಳೂ ಪ್ರದರ್ಶನ ಯೋಗ್ಯವಲ್ಲದಿರಬಹುದುಆದರೆ ಇತ್ತೀಚೆಗೆ ಪ್ರಸಂಗ ಅಧ್ಯಯನಗಳು ಅಕಾಡೆಮಿಕ್ ಸ್ವರೂಪವನ್ನು ಪಡೆದುಕೊಂಡಿವೆ. ಸಾಹಿತ್ಯದ ಯಾವ ಲೇಶವಿಲ್ಲದ ಕವನಗಳೆಂಬ ಹೆಸರಿನಿಂದ ಕರೆಯಲ್ಪಡುವ ಗದ್ಯಗಳಿಗೆ ಸಿಕ್ಕಷ್ಟು ಬೆಲೆಯೂ ಕನ್ನಡ ಸಾಹಿತ್ಯ ವಲಯದಲ್ಲಿ ಯಕ್ಷಗಾನ ಪ್ರಸಂಗಗಳಿಗೆ ಸಿಕ್ಕದಿರುವುದಕ್ಕೆ ಪ್ರಸಂಗ ಸಾಹಿತ್ಯದ ಅನಧ್ಯಯನವೂ ಒಂದು ಕಾರಣ. ಸುಮಾರು ಐದೂವರೆ ಸಾವಿರದಷ್ಟಿರುವ, ಜೊತೆಗೆ ಪ್ರತಿವರ್ಷ ಸುಮಾರು ೩೦ ರಷ್ಟು ಹೆಚ್ಚುತ್ತಿರುವ ಪ್ರಸಂಗಗಳಲ್ಲಿ ಲಭ್ಯ ಪ್ರತಿಗಳು ಮಾತ್ರ ಅತ್ಯಲ್ಪ. ಮೂಲೆ ಮೂಲೆಗಳಲ್ಲಿ ಚದುರಿ ಹೋದ ಯಕ್ಷಗಾನಾಸಕ್ತರ ಸ್ವಪ್ರಯತ್ನದಿಂದ ಕಾಪಿಡಲ್ಪಟ್ಟ ಅಪೂರ್ವ ಪ್ರತಿಗಳು, ಕೆಲವು ಪ್ರಕಾಶನಗಳು ತಮ್ಮ ಬೆಳ್ಳಿಹಬ್ಬ ಮೊದಲಾದ ಅವಸರಗಳಲ್ಲಿ ಹೊರತಂದ ಸಂಪಾದಿತ ಸಂಚಯನಗಳು, ಇತ್ತೀಚೆಗೆ ಕನ್ನಡ ಸಂಸ್ಕೃತಿ ಇಲಾಖೆಯಿಂದ ಪ್ರಕಟಿತವಾದ ಬೆರಳೆಣಿಕೆಯ ಕೋಶಗಳು, ಹಲವು ಕಾಲದ ಹಿಂದೆ ಮಸಿ ಕಂಡ ಕೆಲವು ಪ್ರಸಂಗ ಪುಸ್ತಕಗಳು ಹೊರತು ಪಡಿಸಿದರೆ ಸರ್ವರಿಗೂ ಲಭ್ಯವಾಗುವಂತೆ ಪ್ರಸಂಗಗಳು ಕಾಪಿಡಲ್ಪಟ್ಟಿಲ್ಲ. ಹಾಗಾಗಿಯೇ ಕೇವಲ ಇನ್ನೂರರಷ್ಟು ಪ್ರಸಂಗಗಳು ಮಾತ್ರ ಪ್ರದರ್ಶನಕ್ಕೆ ಲಭ್ಯವಿದ್ದು, ಅವುಗಳು ಮಾತ್ರ ಮತ್ತೆ ಮತ್ತೆ ಆಡಲ್ಪಡುತ್ತಿವೆ. ಅನೇಕ ಕವಿಗಳ ಪ್ರಸಂಗಗಳು ಇನ್ನೂ ಹಸ್ತಪ್ರತಿಯಾಗಿಯೆ ಉಳಿದಿವೆ. ಇದರಿಂದಾಗಿ ಅಕಾಡೆಮಿಕ್ ಆಸಕ್ತಿಯಿಂದ ಪ್ರಸಂಗಗಳ ಅಧ್ಯಯನವನ್ನು ಮಾಡಿ ಯಕ್ಷಗಾನದ ವ್ಯಾಪ್ತಿ ಹಿಗ್ಗಿಸುವ ಸಂಶೋಧಕರಿಗೂ ಸಮಗ್ರ ಪ್ರಸಂಗಗಳು ದೊರೆಯದಂಥಾ ಸನ್ನಿವೇಶವಿದೆ. ಸಾಹಿತ್ಯ ವಿಮರ್ಶೆಯ ದೃಷ್ಟಿಯಿಂದಲೂ ಪ್ರಸಂಗಗಳ ಲಭ್ಯತೆ ಬಹಳ ಮುಖ್ಯ.

ಯಕ್ಷಪ್ರಸಂಗ ಕೋಶದ ಉದ್ದೇಶ ಮತ್ತು ಕಾರ್ಯವ್ಯಾಪ್ತಿ

ಶ್ರೀ ಪಾದೇಕಲ್ಲು ವಿಷ್ಣು ಭಟ್ಟರು, ಶ್ರೀ ಕಬ್ಬಿನಾಲೆ ವಸಂತ ಭಾರದ್ವಾಜರು ನಿಟ್ಟಿನಲ್ಲಿ ಕ್ಷೇತ್ರ ಕಾರ್ಯ ಕೈಗೊಂಡು ಪ್ರಸಂಗ-ಕವಿನಾಮಗಳನ್ನೊಳಗೊಂಡ ಯಾದಿಯನ್ನು ತಯಾರಿಸಿದ್ದಾರೆ. ಅದರಲ್ಲಿ ಉಲ್ಲೇಖಿತ ಮತ್ತು ಹೊರತಾದ ಪ್ರಸಂಗ ಪ್ರತಿಗಳನ್ನೆಲ್ಲ ಸಂಗ್ರಹಿಸಿ, ಛಾಂದಸ - ವಿದ್ವಾಂಸ ಸಹಭಾಗಿತ್ವದಲ್ಲಿ ವಿಮರ್ಶಿಸಿ, ಸ್ವಯಂ ಸೇವಕರ ಮೂಲಕ ಅಚ್ಚಾಗಿಸಿ ಅಂತರ್ಜಾಲದಲ್ಲಿ ಸರ್ವಲಭ್ಯ ಸ್ಥಿತಿಯ ಪ್ರಸಂಗ ಡೇಟಾಬೇಸ್ ಒಂದನ್ನು ಹೊರತರುವುದು ನಮ್ಮ ಮೊದಲ ಆದ್ಯತೆ. ಕೇವಲ ಪ್ರಸಂಗ ಮಾತ್ರವಲ್ಲದೆ, ಪ್ರತಿಯಲ್ಲಿ ಕವಿನಾಮ, ಕವಿಯ ಕಾಲ, ಕಥಾ ಸಾರಾಂಶ, ಪ್ರಸಂಗ ನಡೆ, ಪಾತ್ರ ಆಹಾರ್ಯ ಚಿತ್ರಣ ಇತ್ಯಾದಿಗಳನ್ನು ಸೇರಿಸುವ ಮೂಲಕ ಹೊಸತಾಗಿ ಪ್ರದರ್ಶನಕ್ಕೆ ಆಯ್ದುಕೊಳ್ಳುವ ಉತ್ಸಾಹಿಗಳಿಗೊಂದು ಚೌಕಟ್ಟನ್ನು ಒದಗಿಸಿಕೊಡುವ ಉದ್ದೇಶವೂ ಇದೆ. ಆರ್ಥಿಕ ಅಡಚಣೆಯಿಂದಾಗಿ ಪ್ರಸಂಗಗಳ ಸ್ವಯಂ ಪ್ರಕಾಶನ ಕಷ್ಟಸಾಧ್ಯ. ಜೊತೆಗೆ ಪ್ರಕಾಶಕರೂ ಪ್ರಸಂಗ ಪ್ರಕಟಣೆಗೆ ಮುಂದಾಗುವುದಿಲ್ಲ. ಪ್ರಕಟಿಸಲ್ಪಟ್ಟರೂ ಕೊಂಡು ಓದುವವರ ಸಂಖ್ಯೆಯೂ ಕಡಿಮೆ. ಹಾಗಾಗಿ ಉತ್ಸಾಹಿ ಕವಿಗಳೂ ಒಂದೆರಡು ಪ್ರದರ್ಶನಗಳಿಗೆ ಬೇಕಾಗಿ ಪ್ರಸಂಗ ಬರೆದು ಸುಮ್ಮನುಳಿವ ಸಾಧ್ಯತೆಯೇ ಹೆಚ್ಚು. ತಮ್ಮ ಪ್ರಸಂಗ ಸರ್ವರ ಅವಗಾಹನೆಗೆ ಬರಬೇಕೆಂಬ ಹಂಬಲವುಳ್ಳ ಕವಿಗಳು ತಮ್ಮ ಪ್ರಸಂಗವನ್ನು ಸರ್ವರಿಗೆ ತಲುಪುವಂತೆ ಪ್ರಕಟಿಸುವ ವೇದಿಕೆಯಾಗಿಯೂ ಡೇಟಾಬೇಸ್ ಉಪಯೋಗವಾಗುತ್ತದೆ. ತಮ್ಮ ಪ್ರಸಂಗಗಳನ್ನು ಜನಶ್ರುತಗೊಳಿಸುವ ಸುಲಭ ಉಪಾಯ ಲಭ್ಯವಾದಾಗ ತಾನಾಗಿಯೇ ಪ್ರಸಂಗ ರಚನೆ ಹೆಚ್ಚುತ್ತದೆ, ತನ್ಮೂಲಕ ಯಕ್ಷಗಾನ ಸಾಹಿತ್ಯ ಶ್ರೀಮಂತವಾಗುತ್ತದೆ.

ಮುಂದೆ ಆಯಾ ಪ್ರಸಂಗಗಳ ಪದ್ಯಗಳೊಂದಿಗೆ ಅವುಗಳ ಪ್ರಯೋಗದ ಮುದ್ರಿತ ಧ್ವನಿ-ದೃಶ್ಯ ಗಳನ್ನು ಸಂಯೋಜಿಸಿ (tag) ಕೇವಲ ಆಡಿಯೋ ವೀಡಿಯೋ ಬಯಸುವ ರಸಿಕರಿಗೂ ಅವು ಇನ್ನಷ್ಟು ಸುಲಭ ಲಭ್ಯವಾಗುವಂತೆ ಮಾಡಬಹುದು. ಹೊಸತಾಗಿ ಪ್ರಸಂಗವನ್ನು ಆಡಬೇಕಾದಾಗ, ಕಲಾವಿದರಿಗೂ ಪೂರ್ವಪ್ರಯೋಗ ಮಾಹಿತಿಯೂ ಲಭ್ಯವಾಗುತ್ತದೆ.

ನಮ್ಮ ವಾಮನ ಹೆಜ್ಜೆಗಳು
ಹೀಗೆ ಕಾರ್ಯಪ್ರವೃತ್ತವಾದ ನಮ್ಮ ತಂಡ ಈಗಾಗಲೇ ,೫೦೦+ ಪ್ರಸಂಗಗಳ ಯಾದಿಯನ್ನು, ಅಕಾರಾದಿಯಲ್ಲಿ ಸಂಪಾದಿಸಿ, ಸಂಗ್ರಹಿಸಿದೆ. ನಮ್ಮ ಮನವಿಗೆ ಓಗೊಟ್ಟ ಅನೇಕ ಪ್ರಸಂಗ ಸಂಗ್ರಹಕಾರರು ತಮ್ಮ ಅಮೂಲ್ಯ ಪ್ರಸಂಗ ಸಂಚಯನವನ್ನು ನಮಗಿತ್ತು ಸಹಕರಿಸಿದ್ದಾರೆ. ಈಗಾಗಲೇ ಅನೇಕ ನಿಃಸ್ವಾರ್ಥ ಸ್ವಯಂಸೇವಕರು  ತಮ್ಮ ವಿರಾಮದಲ್ಲಿ  ಎಪ್ಪತ್ತಕ್ಕೂ ಹೆಚ್ಚಿನ ಪ್ರಸಂಗಗಳನ್ನು ಅಚ್ಚಿಸಿ ಕೊಟ್ಟಿದ್ದಾರೆ. ಪ್ರಸಂಗಕಾರರೂ ಹಾಗೂ ಸಂಪನ್ಮೂಲ ವ್ಯಕ್ತಿಗಳೂ ಆದ ಶ್ರೀ ಮೃತ್ಯುಂಜಯ ಗಿಂಡಿಮನೆ, ಶ್ರೀ ಶ್ರೀಧರ ಡಿ. ಎಸ್. ಮೊದಲಾದ ಹಿರಿಯರ ಸಹಯೋಗದಲ್ಲಿ ಅನೇಕ ಪ್ರಸಂಗಗಳ ಪ್ರೂಫ್ ತಿದ್ದುವ ಕೆಲಸವನ್ನೂ ಕೈಗೊಳ್ಳಲಾಗಿದೆ. ಮೊದಲಿಗೆ ಸುಮಾರು ೧೦೦ ಪ್ರಸಂಗಗಳನ್ನು ಲೋಕಾರ್ಪಣ ಮಾಡುವತ್ತ ಮುಂದುವರಿದಿದ್ದೇವೆ.

ನಿಮ್ಮ ಸಹಯೋಗ
ನಾವು ಗಮಿಸಿದ ದಾರಿ ಕಡಿಮೆ, ಗಮಿಸಬೇಕಾದ ದಾರಿ ಬಹಳಷ್ಟಿದೆ. ಇದಕ್ಕೆ ನಮ್ಮೊಂದಿಗೆ ನಿಮ್ಮ ಸಹಯೋಗವೂ ಅನಿವಾರ್ಯ. ಯಕ್ಷಮಾತೆಯ ಸೇವೆಯ ಕೆಲಸದಲ್ಲಿ ತಾವೂ ತಮ್ಮ ಯೋಗದಾನವನ್ನು ನೀಡಬಹುದು ಮಾತ್ರವಲ್ಲ, ಅದು ಅನಿವಾರ್ಯವೂ ಹೌದು.
·         ನಿಮ್ಮಲ್ಲಿರುವ ಅಪೂರ್ವ ಪ್ರಸಂಗಗಳ ಸಂಚಯನವನ್ನು ನಮಗೆ ನೀಡಿದರೆ ಮಹದುಪಕಾರ. ಪರಹಸ್ತಗತ ಪುಸ್ತಕಗಳ ಸ್ಥಿತಿ ಹೇಗಿರುತ್ತದೆಂದು ಅರಿತ ಯಾರೂ ಕೊಡಲು ಮುಂದೆ ಬರುವುದಿಲ್ಲ. ನೀವೂ ಪುಸ್ತಕವನ್ನೇ ನೀಡಬೇಕೆಂದಿಲ್ಲ. ತಮ್ಮ ಮೊಬೈಲ್ ಫೋನ್ನ ಮೂಲಕ ರಕ್ಷಾಪುಟಗಳೂ ಸೇರಿದಂತೆ ಸಂಪೂರ್ಣ ಪುಸ್ತಕದ ಒಳ್ಳೆಯ ಫೋಟೋ ತೆಗೆದು ನಮಗೆ ಕಳುಹಿಸಬಹುದು. ಅಲ್ಲದಿದ್ದರೆ ಸಂಪೂರ್ಣ ಪುಸ್ತಕದ ಸ್ಕ್ಯಾನ್ ಪ್ರತಿ ಕಳುಹಿಸಿದರೆ ಉಪಕಾರ. ತಾವೇ ಟೈಪಿಂಗ್ ಬಲ್ಲವರಾದರೆ, ನಮ್ಮಿಂದ ಟೆಂಪ್ಲೇಟ್ ಪಡೆದು ಅದರಂತೆ ಟೈಪಿಸಿ ಕಳುಹಿಸಿದರೆ ಮಹದುಪಕಾರ.
·         ಕನ್ನಡ ಟೈಪಿಂಗ್ ಬಲ್ಲವರಾದರೆ, ನಮ್ಮಿಂದ ಟೆಂಪ್ಲೇಟ್ ಹಾಗೂ ಪ್ರಸಂಗ ಪ್ರತಿಗಳನ್ನು ಪಡೆದು, ತಮ್ಮ ವಿರಾಮದ ವೇಳೆಯಲ್ಲಿ ಟೈಪಿಸಿ ಕೊಡಬಹುದು.
·         ಅಪೂರ್ವ ಪ್ರಸಂಗಗಳ ಸಂಗ್ರಹಕಾರರು ತಮಗೆ ತಿಳಿದಿದ್ದರೆ, ಅವರ ಹೆಸರು ಹಾಗೂ ಸಂಪರ್ಕ ವಿವರವನ್ನು ನಮಗೆ ಕೊಡಬಹುದು. ಅನೇಕ ಬಾರಿ ಫೋಟೊ, ಸ್ಕ್ಯಾನ್ ಮೊದಲಾದ ತಾಂತ್ರಿಕ ವಿಷಯಗಳನ್ನರಿಯದ, ಆದರೆ ನಮ್ಮೊಂದಿಗೆ ಕೈಜೋಡಿಸಬಯಸುವ ಆಸಕ್ತ ಸಂಗ್ರಹಕಾರರಿದ್ದರೆ, ತಾವು ಅವರ ಒಪ್ಪಿಗೆಯೊಂದಿಗೆ, ಅವರ ಸಂಗ್ರಹದ ಪ್ರತಿಗಳನ್ನು ನಮಗೆ ಕಳುಹಿಸಬಹುದು.

ಆಸಕ್ತರು ಸಂಪರ್ಕಿಸಬಹುದಾದ ವಿಳಾಸ:
·         ನಟರಾಜ ಉಪಾಧ್ಯ : ೯೬೩೨೮೨೪೩೯೧
·         ರವಿ ಮಾಡೋಡಿ : ೯೯೮೬೩೮೪೨೦೫
·         ಪ್ರದೀಪ ವಿ ಸಾಮಗ: ೯೯೬೪೨೩೭೩೬೦

ಹೀಗೆ ಕನಸುಗಳು ಸಾಕಷ್ಟಿವೆ. ಆದರೆ ಇವುಗಳ ಕಾರ್ಯಸಾಧ್ಯತೆಯ ಹೊಣೆಗಾರಿಕೆಯೂ ಸಾಕಷ್ಟಿವೆ. ಅನುದಾನಿತ ಅಕಾಡೆಮಿಗಳು ಮಾಡಬೇಕಾದ ಕೆಲಸವಿದು ಎಂಬ ಪ್ರಜ್ಞೆಯೂ ಇದೆ. ಆದರೆ ಯಕ್ಷಗಾನ ಇವತ್ತಿನ ತನಕ ಸ್ವಾಭಿಮಾನಿಯಾಗಿ ಬೆಳೆದು ನಿಂತ ಕಲೆ. ವಾರ್ಷಿಕ ೩೦ ಕೋಟಿಗೆ ಕಡಿಮೆಯಿಲ್ಲದ ವಹಿವಾಟು ನಡೆಸುವ ಯಕ್ಷಗಾನದ ನೆಗಳ್ತೆಯ ಬಳ್ಳಿಗೆ ನೀರೆರೆದವರು ಕೇವಲ ಆಸಕ್ತ ಅಭಿಮಾನಿಗಳೆ ಹೊರತು ಸರಕಾರಗಳಲ್ಲ. ಹಾಗಾಗಿ ನಾವೀ ಗುರುತರ ಕಾರ್ಯದೆಡೆಗೆ ಪುಟ್ಟ ಹೆಜ್ಜೆಗಳನ್ನಿಡುತ್ತಿದ್ದೇವೆ. ಎಲ್ಲವನ್ನೂ ನಾವೇ ಮಾಡುತ್ತೇವೆನ್ನುವ ಅಹಂ ಆಗಲಿ, ಧೈರ್ಯವಾಗಲಿ ನಮಗಿಲ್ಲ. ನೆಲ ಸೇರಿದ ಮಳೆಯ ಹನಿಗಳೊಂದಾಗಿ ಒಮ್ಮತದಿ ಒಂದೆಡೆಗೆ ಹರಿದು ನದಿಯಾಗುವಂತೆ ನಮ್ಮೀ ಪ್ರಯತ್ನ, ನೆಲೆಯ ಕಸುವು, ಕನಸಿರುವ ಎಲ್ಲರನ್ನು ಒಂದಾಗಿಸಿದರೆ ಅಸಂಭವವೇನಲ್ಲ ಎಂಬ ಅಚಲ ನಂಬಿಕೆ ಮಾತ್ರ ನಮಗಿದೆ.

ತಳಹದಿಯಲ್ಲಿ ತಳದಿಂದ ಕಾರ್ಯಾರಂಭ ಮಾಡಿದ ನಮ್ಮನ್ನು ಯಕ್ಷಗಾನಾಸಕ್ತ ಅಭಿಮಾನಿಗಳು ತ್ರಿಕರಣ ಪೂರ್ವಕ ಹರಕೆ ಹಾರೈಕೆಗಳೊಂದಿಗೆ ಉಳಿಸಿಕೊಳ್ಳುತ್ತಾರೆ, ಬೆಳೆಸಿಕೊಡುತ್ತಾರೆ ಎಂಬ ನಂಬಿಕೆಯೊಂದಿಗೆ,

ಯಕ್ಷಪ್ರಸಂಗ ಕೋಶ ತಂಡದ ಪರವಾಗಿ,


ಡಾ. ಪ್ರದೀಪ ವಿ ಸಾಮಗ

4 comments:

  1. ಉತ್ತಮ ಪ್ರಯತ್ನ.ಅಭಿನಂದನೆಗಳು.ಯಕ್ಷಗಾನದಂತಹ ಕ್ಷೇತ್ರಗಳಲ್ಲಿ ದಾಖಲೀಕರಣದ ಕೊರತೆ ತುಂಬ ಇದೆ. ನಿಮ್ಮ ಯೋಜನೆ ಯಕ್ಷಗಾನ ರಂಗಕ್ಕೆ ದೊಡ್ಡ ಕೊಡುಗೆಯಾಗಬಹುದು.

    ReplyDelete
  2. Rakta ratri and gadhayudda prasanga prati idre kalsi plzz . Plz mail madi

    ReplyDelete
  3. Rakta ratri and gadhayudda prasanga prati idre kalsi plzz . Plz mail madi

    ReplyDelete

ಯಕ್ಷಪ್ರಸಂಗಕೋಶದಲ್ಲಿ ಡಿಜಿಟಲೀಕರಣಗೊಂಡ ಒಟ್ಟು ಪ್ರಸಂಗಗಳ ಸಂಖ್ಯೆ ೨೫೫!

  ಯಕ್ಷಪ್ರೇಮಿಗಳೇ, ಯಕ್ಷಸಾಹಿತ್ಯದ ಡಿಜಿಟಲೀಕರಣ ಯೋಜನೆಯಾದ ಯಕ್ಷಪ್ರಸಂಗಕೋಶಕ್ಕೆ ೧೮ನೇ ಹಂತದಲ್ಲಿ ೧೫ ಪ್ರಸಂಗಗಳು ಅಂತರಜಾಲ ಪ್ರತಿಗಳಾಗಿ ಲೋಕಾರ್ಪಣೆಯಾಗುವ ಮೂಲಕ ಈವರೆಗೆ...