ಕನ್ನಡ ಸಂಸ್ಕೃತ ಇಲಾಖೆಯ ಸನ್ಮಾನ ಸಚಿವ ಸಿ. ಟಿ. ರವಿ ಅವರು ೪೪ ಪ್ರಸಂಗಗಳ ಡಿಜಿಟಲೀಕರಣವನ್ನು ಲೋಕಾರ್ಪಣ ಮಾಡುವ ಮುನ್ನ ಸಹಯೋಗಿ ಸಂಸ್ಥೆಯ ಅಧ್ಯಕ್ಷ ಡಾ. ಆನಂದರಾಮ ಉಪಾಧ್ಯರು ಪ್ರಾಸ್ತಾವಿಕ ಭಾಷಣ ಮಾಡುತ್ತಿರುವುದು |
ಮಾನ್ಯರೇ, ನಿನ್ನೆ ಡಿಸೆಂಬರ್ ೨೭ರಂದು ಯಕ್ಷವಾಹಿನಿ ಸಂಸ್ಥೆಯ ಸಹಯೋಗದಲ್ಲಿ ಕರ್ನಾಟಕ ಯಕ್ಷಗಾನ ಅಕಾಡೆಮಿಯಿಂದ ೪೪ ಪ್ರಸಂಗಗಳ ಡಿಜಿಟಲೀಕರಣವು ಲೋಕಾರ್ಪಣಗೊಂಡಿತು. ಈ ೪೪ ಪ್ರಸಂಗಗಳು ಅಕಾಡೆಮಿಯ ವೆಬಸೈಟಿನಲ್ಲಿ ಮಾತ್ರ ಸಿಗುವುದಲ್ಲದೇ ನಮ್ಮ ಯಕ್ಷಪ್ರಸಂಗಕೋಶದಲ್ಲೂ ಸಿಗುತ್ತವೆ.
ಕರ್ನಾಟಕ ಯಕ್ಷಗಾನ ಅಕಾಡೆಮಿಯ ವೆಬ್ಸೈಟಿನಲ್ಲಿ ಪ್ರಸಂಗ ಡಿಜಿಟಲೀಕರಣದ ವಿಭಾಗಕ್ಕಾಗಿ ಈ ಕೆಳಗಿನ ಕೊಂಡಿಯನ್ನು ಒತ್ತಿ.
ಕರ್ನಾಟಕ ಯಕ್ಷಗಾನ ಅಕಾಡೆಮಿಯ ಪ್ರಸಂಗಗಳ ಡಿಜಿಟಲೀಕರಣ ಯೋಜನೆಯ ವೆಬ್ಸೈಟಿನ ವಿಭಾಗದ ಕೊಂಡಿ
ಇದೇ ೪೪ ಪ್ರಸಂಗಗಳನ್ನು ನಮ್ಮ ಯಕ್ಷಪ್ರಸಂಗಕೋಶದಲ್ಲೂ ಸೇರಿಸಲಾಗಿದ್ದು, ಯಕ್ಷಪ್ರಸಂಗಕೋಶದಲ್ಲಿ ಅವುಗಳ ಕೊಂಡಿಗಳು ಈ ರೀತಿ ಇವೆ. ಈ ಪ್ರಸಂಗಗಳು ಯಕ್ಷಪ್ರಸಂಗಕೋಶದಲ್ಲಿ ಮೊದಲೇ ಪ್ರಕಟಿತವಾಗಿದ್ದು ಈ ಆವೃತ್ತಿಗಳ ಮೂಲಕ ಇನ್ನಷ್ಟು ಪರಿಷ್ಕೃತಗೊಂಡಿರುವ ಕಾರಣ ಆಸಕ್ತರು ಮತ್ತೊಮ್ಮೆ ಈ ಕೊಂಡಿಗಳ ಮೂಲಕ ಕೆಳಗಿಳಿಸಿಕೊಳ್ಳಬಹುದು. ಅಕಾಡೆಮಿ ವೆಬ್ಸೈಟಿನಲ್ಲಿ ಸಿಗುವ ಈ ಪ್ರಸಂಗಗಳನ್ನು ಅದೇ ಆವೃತ್ತಿಯಲ್ಲಿ ಇಲ್ಲೂ ಸಿಗುವ ಹಾಗೆ ಮಾಡುವ ಮೂಲಕ, ಇವಗಳ ಸುತ್ತಲಿನ ಕೆಲಸಕ್ಕೆ ಅಕಾಡೆಮಿಯು ಕೊಟ್ಟ ಸಹಾಯಧನವನ್ನೇ ಪ್ರಾಯೋಜಕತ್ವವೆಂದು ಭಾವಿಸಿ ಅದನ್ನು ನಾವಿಲ್ಲಿ ಮನ್ನಿಸಿದ ಹಾಗೂ ಆಗಿದೆ, ಡಿಜಿಟಲೀಕೃತ ಈ ಪ್ರಸಂಗಗಳ ಉಚಿತ ಹಂಚಿಕೆಗೆ ನಾವು ಅಕಾಡೆಮಿಗೆ ಮತ್ತಷ್ಟು ಸಹಕಾರದ ಭುಜ ಕೊಟ್ಟ ಹಾಗೂ ಆಗಿದೆ.
ಯಕ್ಷಪ್ರಸಂಗಕೋಶ ಯೋಜನೆಯಡಿ ಯಕ್ಷವಾಹಿನಿಯಿಂದ ಪ್ರಕಟಿಸಲ್ಪಟ್ಟ ಎಲ್ಲಾ ಪ್ರಸಂಗಗಳ ಇತ್ತೀಚಿನ ಕೋಷ್ಟಕಕ್ಕಾಗಿ ಈ ಕೆಳಗಿನ ಕೊಂಡಿಯನ್ನು ಒತ್ತಿ.
ಯಕ್ಷಪ್ರಸಂಗಕೋಶ ಯೋಜನೆಯಡಿ ಪ್ರಕಟಿತ ಎಲ್ಲಾ ಪ್ರಸಂಗಗಳು
ಅಕಾಡೆಮಿಯಿಂದ ಬಂದ ಸಹಾಯಧನದಲ್ಲಿ ಸಮಕಾಲೀನ ಕವಿಗಳಿಗೆ ಮಾತ್ರ ಆಯಾ ಪ್ರಸಂಗದ ಸಹಾಯಧನದ ಸಿಂಹಪಾಲನ್ನು ಸಲ್ಲಿಸುವ ಮೂಲಕ ನಮ್ಮ ಕೆಲಸದಲ್ಲಿ ನಂಬಿಕೆ ಇಟ್ಟು ಸಹಕರಿಸಿದ ಅವರಿಗೆ ನಾವು ಅರ್ಥವತ್ತಾಗಿ ಕೃತಜ್ಞತೆ ಸಲ್ಲಿಸುವುದು ಈ ಅಕಾಡೆಮಿಯ ಯೋಜನೆಯ ಮೂಲಕ ಸಾಧ್ಯವಾಗಿದೆ. ಉಳಿದ ಹಣವನ್ನು ಸಂಸ್ಥೆಯ ಕಾನೂನು ಪಾಲನೆ ನಿರ್ವಹಣೆ, ಸಂಪನ್ಮೂಲಗಳ ಖರ್ಚು ಮತ್ತು ಮುಂದಿನ ಮಹತ್ವಾಕಾಂಕ್ಷಿ ಯೋಜನೆಗಳ ಸುತ್ತಲಿನ ಅರ್ಥವತ್ತಾದ ವೆಚ್ಚಗಳಿಗೆ ಮೀಸಲಿಡುತ್ತಿದ್ದೇವೆ.
ಈ ಮೂಲಕ, ಸ್ವಯಂಸೇವೆಯಲ್ಲೇ ಸಲ್ಲುತ್ತಿರುವ ನೂರಾರು ಮಂದಿಗಳ ಶ್ರಮದಾನವನ್ನು ಹಣದಿಂದ ಅಳೆಯದೇ ಅವರ ಸೇವೆಯನ್ನು ಮತ್ತೊಮ್ಮೆ ನೆನೆಸಿಕೊಂಡು ಕೃತಜ್ಞತೆಯನ್ನು ಅರ್ಪಿಸುತ್ತಿದ್ದೇವೆ. ನಾವು ಕೆಲಸ ಮಾಡುವ ನಿಮಿತ್ತ ಒಟ್ಟು ಸೇರಿದಾಗ ಬರುವ ಕಾಫಿ ತಿಂಡಿ ಊಟಗಳ ಖರ್ಚುಗಳನ್ನೂ ಕೂಡಾ ಸಂಸ್ಥೆಯಿಂದ ಭರಿಸದೇ, ನಮ್ಮ ನಮ್ಮ ಕಿಸೆಯಿಂದ ಕೊಡುವ ಮೂಲಕ ನಡೆಯುತ್ತಿರುವ ಸ್ವಯಸೇವೆಗೆ ಹೆಚ್ಚಿನ ಘನಸ್ತಿಕೆಯನ್ನು ಕೊಡುತ್ತಿರುವುದಲ್ಲದೇ, ಸಂಸ್ಥೆಯಲ್ಲಿ ಕೃಮೇಣ ಈ ರೀತಿಯ ಸಹಾಯಧನ ಇಲ್ಲಾ ಈವರೆಗೆ ಬಂದ ಮತ್ತು ಮಂದೆ ದಾನಿಗಳಿಂದ ಬರಬಹುದಾದ ಯಾವುದೇ ಅನುದಾನದ ಹಣವನ್ನು ಕೂಡಾ ಯಕ್ಷಗಾನ ಕುರಿತಾದ ಅಂತರಜಾಲ ದಾಖಲೀಕರಣಕ್ಕೆ ಸಂಬಂಧಿಸಿದ ಯೋಜನೆಗಳ ಸುತ್ತ ಅನಿವಾರ್ಯ ಖರ್ಚುಗಳಿಗೆ ಮಾತ್ರ ಮೀಸಲಿಟ್ಟು, ಒಂದು ಪೈಸೆಯೂ ಕೂಡಾ ಪೋಲಾಗದ ಹಾಗೆ ಕಟ್ಟೆಚ್ಚರ ವಹಿಸುತ್ತಿದ್ದೇವೆ. ಇದನ್ನು ಬರೇ ಮಾತಲ್ಲೇ ಮುಗಿಸದೇ, ನಮ್ಮ ಹಣಕಾಸಿನ ವಾರ್ಷಿಕ ವರದಿಗಳನ್ನು ಮುಂದೆ ಸಾರ್ವಜನಿಕಗೊಳಿಸುವ ಮೂಲಕ ಕೃತಿಯಲ್ಲೂ ತೋರಿಸಲಿದ್ದೇವೆ. ಆ ಕಾರಣವಾಗಿಯೇ ಸ್ವಯಂಸೇವೆಯೇ ಯಕ್ಷವಾಹಿನಿಯ ಮುಖ್ಯವಾಹಿನಿಯಾಗಿ ಮುಂದುವರಿಯುತ್ತದೆ. ಗೃಹಿಣಿಯರು, ವೃತ್ತಿ ನಿರತರು, ನಿವೃತ್ತಿಯವರು, ಟೆಕ್ಕಿಗಳು ಅಲ್ಲದೇ, ಅನೇಕ ಪ್ರಸಿದ್ಧ ಯಕ್ಷಗಾನ ಪ್ರಸಂಗ ಕವಿಗಳು, ಕಲಾವಿದರು, ವಿದ್ವಾಂಸರು, ಸಂಶೋಧಕರು ಕೂಡಾ ನಮ್ಮ ಸ್ವಯಂಸೇವಕಮಂಡಳಿಯಲ್ಲಿ ಸೇರಿಹೋಗಿದ್ದು, ಈ ಸಮೂಹದ ಸುತ್ತಲಿನ ಪ್ರಭಾವಳಿಯನ್ನು ತಮ್ಮ ಇರವು ಮತ್ತು ಕೆಲಸಗಳ ಮೂಲಕ ಮತ್ತಷ್ಟು ಹೆಚ್ಚಿಸಿದ್ದಾರೆ. ಒಟ್ಟಿನಲ್ಲಿ ಎಲ್ಲಾ ಸ್ವಯಂಸೇವಕರು ಯಕ್ಷಗಾನದ ಚರಿತ್ರೆಯಲ್ಲಿ ಈ ಯೋಜನೆಗಳ ಸುತ್ತಲಿನ ಅಪೂರ್ವ ಜ್ಞಾನದಾನ, ಶ್ರಮದಾನ, ಸಮಯದಾನ ಮತ್ತು ಆ ಕುರಿತಾಗಿ ಬರುವ ಕಿಂಚಿತ್ ಖರ್ಚುಗಳ ತ್ಯಾಗಗಳ ಮೂಲಕ "ಯಕ್ಷವೀರ"ರಾಗಿಯೇ ಉಳಿದು ಬೆಳೆಯುತ್ತಾ ಹೋಗುತ್ತಾರೆ. ಹಾಗಾಗಿಯೇ, ಎಲ್ಲಾ ಪ್ರಸಂಗಗಳ ಸುತ್ತಲಿನ ಸ್ವಯಂಸೇವಕರ ಸೇವೆಯನ್ನು ಕೊನೆಯ ಪುಟದಲ್ಲಿ ಕೃತಜ್ಞತೆಗಳು ಎಂಬ ಶೀರ್ಷಿಕೆಯಡಿ ನಮೂದಿಸುವುದು ನಮಗೆ ಧಾರ್ಮಿಕವಾದ ಕೆಲಸವಾಗಿದೆ. ಈ ಕುರಿತಾಗಿ ನಮ್ಮಿಂದ ತಪ್ಪುಗಳಾಗಿ ಕೆಲವರ ಹೆಸರು ಬಿಟ್ಟು ಹೋಗಿದ್ದರೆ, ಕೂಡಲೇ ನಮ್ಮ ಗಮನಕ್ಕೆ ತನ್ನಿ.
ನಿಮ್ಮೆಲ್ಲರ ಎಂದಿನ ಸಹಕಾರ ಸೇವೆಗಳಿಗೆ ನಮಿಸುವ,
- ನಟರಾಜ ಉಪಾಧ್ಯ, ಯಕ್ಷಪ್ರಸಂಗಯೋಜನೆ ನಾಯಕತ್ವ ತಂಡ ಹಾಗೂ ಯಕ್ಷವಾಹಿನಿ ವಿಶ್ವಸ್ಥರ ಪರವಾಗಿ
ಅಕಾಡೆಮಿ ಕಾರ್ಯಕ್ರಮ ಕುರಿತಾದ ಕೆಲವೇ ಚಿತ್ರಮಾಹಿತಿಗಳನ್ನು ಕೆಳಗೆ ಕೊಡಲಾಗಿದೆ.
ಚಿತ್ರಕೃಪೆ - ತೀರ್ಥಳ್ಳಿ ರಾಘವೇಂದ್ರ ಅಡಿಗ |
No comments:
Post a Comment